ಪೋರ್ಟರ್, ಜಾರ್ಜ್
1920. ಆಂಗ್ಲ ರಸಾಯನ ವಿಜ್ಞಾನಿ. ಯಾರ್ಕ್‍ಷೈರ್ ಜಿಲ್ಲೆಯ ಸ್ಟಾನ್‍ಫರ್ತ್ ಎಂಬಲ್ಲಿ 1920 ಡಿಸೆಂಬರ್ 6 ರಂದು ಜನನ. ಲೀಡ್ಸ್ ವಿಶ್ವವಿದ್ಯಾಲಯದ ಪದವೀಧರ. ಎರಡನೆಯ ಮಹಾಯುದ್ಧ ಕಾಲದಲ್ಲಿ ಬ್ರಿಟಿಷ್ ನೌಕಾಪಡೆಯ ರೇಡಾರ್ ವಿಭಾಗದಲ್ಲಿ ಅಧಿಕಾರಿ. ಮುಂದೆ ಇವರು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಗಳನ್ನು ಮನ್ನಿಸಿ ಇವರಿಗೆ ಡಾಕ್ಟೊರೇಟ್ ನೀಡಲಾಯಿತು. ಅಲ್ಲಿಯೇ ಅಧ್ಯಾಪಕ ಸಂಶೋಧಕರಾಗಿ ಸೇರಿಕೊಂಡರು (1949). ಅಲ್ಲಿಯ ಭೌತ ರಸಾಯನ ವಿಭಾಗದ ಮುಖ್ಯಸ್ಥ ನೋರಿಷ್ ಎಂಬುವರ ನೇತೃತ್ವದಲ್ಲಿ ಪೋರ್ಟರ್ ಅತಿ ಕ್ಷಿಪ್ರ ರಾಸಾಯನಿಕ ಕ್ರಿಯೆಗಳ ಬಗ್ಗೆ ಸಂಶೋಧನೆ ಎತ್ತಿಕೊಂಡರು.

ಕೆಲವು ರಾಸಾಯನಿಕ ಕ್ರಿಯೆಗಳ ಗತಿ ಏಕಮುಖವಾಗಿರುತ್ತದೆ. ಅಂದರೆ ಕ್ರಿಯಾಭಾಗಿಗಳು ಪರಿವರ್ತನೆ ಹೊಂದಿ ಉತ್ಪನ್ನಗಳನ್ನು ನೀಡುವುವೇ ವಿನಾ ಉತ್ಪನ್ನಗಳು ಪುನಃ ಪರಿವರ್ತನೆ ಹೊಂದಿ ಮೊದಲಿನ ಪದಾರ್ಥಗಳನ್ನು ನೀಡುವುದಿಲ್ಲ. ಇವು ಅಪರಾವರ್ತನಶೀಲ ಕ್ರಿಯೆಗಳು. ಇನ್ನು ಕೆಲವು ಕ್ರಿಯೆಗಳಲ್ಲಿ ಉತ್ಪನ್ನಗಳು ಮೊದಲಿನ ಪದಾರ್ಥಗಳನ್ನು ಮರುನೀಡಬಲ್ಲವು. ಇವು ಪರಾವರ್ತನಶೀಲ (ರಿವರ್ಸಬಲ್) ಕ್ರಿಯೆಗಳು. ಉತ್ಪನ್ನಗಳು ಕ್ರಿಯಾವರಣದಿಂದ ನಿರ್ಗಮಿಸಲು ಅವಕಾಶ ಇಲ್ಲದಿದ್ದರೆ ಮಾತ್ರ ಕ್ರಿಯೆ ಪರಾವರ್ತನಶೀಲವಾಗಬಲ್ಲದು. ಪ್ರಾರಂಭದಲ್ಲಿ ಕ್ರಿಯಾಭಾಗಿಗಳು ಮಾತ್ರ ಇದ್ದು ಅವುಗಳ ಸಾರತೆ ಅಧಿಕವಾಗಿರುವುದರಿಂದ ಅಭಿಮುಖ (ಫಾರ್ವರ್ಡ್) ಕ್ರಿಯೆ ರಭಸದಿಂದ ಜರುಗುತ್ತದೆ. ಕ್ರಮೇಣ ಅವುಗಳ ಸಾರತೆಗಳು ಬಿದ್ದುಹೋಗುವುದರಿಂದ ರಾಶಿ ಕ್ರಿಯಾ ನಿಯಮಕ್ಕೆ ಅನುಗುಣವಾಗಿ ಅಭಿಮುಖ ಕ್ರಿಯೆಯ ದರ ಕಡಿಮೆಯಾಗುತ್ತ ಹೋಗುವುದು. ಅದೇ ವೇಳೆ ಉತ್ಪನ್ನಗಳ ಸಾರತೆಗಳು ಹೆಚ್ಚುತ್ತ ಹೋಗುವುದರಿಂದ ಪರಾಙ್ಮುಖ (ಬ್ಯಾಕ್‍ವರ್ಡ್) ಕ್ರಿಯೆಯ ದರವೂ ಹೆಚ್ಚುತ್ತ ಹೋಗುವುದು. ಇದು ಹೀಗೆಯೇ ಮುಂದುವರಿದು ಒಂದು ಹಂತದಲ್ಲಿ ಅಭಿಮುಖ ಕ್ರಿಯೆಯ ದರ ಪರಾಙ್ಮುಖ ಕ್ರಿಯೆಯ ದರಕ್ಕೆ ಸಮವಾಗಿಬಿಡುವುದು. ಆ ಸ್ಥಿತಿ ತಲಪಿದ ತರುವಾಯ ಕ್ರಿಯಾಭಾಗಿಗಳು ಯಾವ ದರದಲ್ಲಿ ಪರಿವರ್ತನೆ ಹೊಂದುತ್ತವೆಯೋ ಅದೇ ದರದಲ್ಲಿ ಉತ್ಪತ್ತಿಯಾಗುತ್ತಲೂ ಇರುತ್ತವೆ. ಉತ್ಪನ್ನಗಳ ವಿಷಯದಲ್ಲೂ ಇದು ನಿಜ. ಅಂದರೆ ಕ್ರಿಯಾಭಾಗಿಗಳ ಸಾರತೆಗಳಲ್ಲೇ ಆಗಲಿ ಉತ್ಪನ್ನಗಳ ಸಾರತೆಗಳಲ್ಲೇ ಆಗಲಿ ಮುಂದೆ ಯಾವ ಬದಲಾವಣೆಯೂ ಆಗುವುದಿಲ್ಲ. ಈ ಸ್ಥಿತಿಗೆ ರಾಸಾಯನಿಕ ಸಮತೋಲನ (ಕೆಮಿಕಲ್ ಈಕ್ವಿಲಿಬ್ರಿಮ್) ಎಂದು ಹೆಸರು. ಹೀಗೆ ರಾಸಾಯನಿಕ ಸಮತೋಲನ ತಲುಪಿರುವ ಅನಿಲ ಮಂಡಲಗಳನ್ನು ಕ್ಷಣಿಕ ಪ್ರಕಾಶದಿಂದ ಬೆಳಗಿದಾಗ ಅವುಗಳ ಸಮತೋಲನ ತಾತ್ಕಾಲಿಕವಾಗಿ ತಪ್ಪಿ ಹೋಗಿ ಅಸಮತೋಲನ ಉಂಟಾಗುವುದೆಂದೂ ಮತ್ತೆ ಸಮತೋಲನ ಸ್ಥಾಪಿತವಾಗಲು ಹಿಡಿಯುವ ಅವಧಿಯನ್ನು ಅಳೆಯಬಹುದೆಂದೂ ಪೋರ್ಟರ್ ತೋರಿಸಿದರು. ಈ ತಂತ್ರ ಬಳಸಿ ಅತ್ಯಲ್ಪ ಅವಧಿಯಲ್ಲಿ ಅಂದರೆ ಸೆಕೆಂಡಿನ ಒಂದು ಬಿಲಿಯನ್ನಿನಷ್ಟು ಕಾಲದಲ್ಲಿ ಜರುಗುವ ರಾಸಾಯನಿಕ ಕ್ರಿಯೆಗಳನ್ನು ಸಹ ಗಮನಿಸಲು ಸಾಧ್ಯವೆಂದು ನೋರಿಷ್ ಮತ್ತು ಪೋರ್ಟರ್ ಇವರ ಪ್ರಯೋಗಗಳಿಂದ ಗೊತ್ತಾಯಿತು. ಈ ಅಪೂರ್ವ ಸಾಧನೆಗಾಗಿ ಇಬ್ಬರಿಗೂ 1967 ನೆಯ ಸಾಲಿನ ರಸಾಯನ ವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕದ ಅರ್ಧಭಾಗವನ್ನು ಹಂಚಿಕೊಡಲಾಯಿತು. ಉಳಿದ ಅರ್ಧ ಭಾಗವನ್ನು ಇದೇ ಕ್ಷೇತ್ರದಲ್ಲಿ ಬೇರೊಂದು ಬಗೆಯ ಸಂಶೋಧನೆ ನಡೆಸಿದ ಐಗನ್ ಪಡೆದರು.
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ